ತಾಯಿ


ತಾಯ ಪ್ರೀತಿಗಳತೆಯಿಲ್ಲ
ತಾಯಿ ಮಮತಾ ಮೂರುತಿ
ತಾಯಿ ಬೆಲೆಯ ಅರಿತು ಬಾಳು
ತಾಯಿ ಆಶೀರ್ವಾದದಿ

ಕಾಯುವಳು ಮಗುವಿಗಾಗಿ
ಕಾಯ ಶಕ್ತಿಯಿಂದಲಿ
ಕಾಯಕದಲ್ಲಿ ಮಗುವ ನೆನಪು
ಕಾಯುವುದೇ ಕೆಲಸವು

ತಾಳುವುದು  ರೂಢಿಯಾಯ್ತು
ತಾಳಿ ಮಗುವ ಚೇಷ್ಟೆಯ
ತಾಳಿ  ಬಿಸಿ ರಕ್ತದ  ನುಡಿಗಳ
ತಾಳ್ವಳು ಮನದ ನೋವನು

ರೆಕ್ಕೆ ಬಲಿತ ಹಕ್ಕಿ ಹಾಗೆ
ಮಕ್ಕಳ ಬಿಟ್ಟುಕೊಡುವಳು
ಮಕ್ಕಳ ಬರುವಿಕೆಯ ನೆನೆದು
ಅಕ್ಕರೆಯಿಂ ಕಾಯ್ವಳು

ಎಷ್ಟು ಬೆಳದರೇನು ಅವರು ತಾಯಿಗಿನ್ನು ಮಕ್ಕಳೆ
ಎಷ್ಟು ಮಾಡಿದರು ಪ್ರೀತಿ ಸಾಲದು ಈ ತಾಯಿಗೆ
ಎಷ್ಟು ಹೇಳೀದರು ಮಾತು ತೀರದಿವಳ ಕಾಳಜಿ
ಎಷ್ಟು ಕಷ್ಟಪಟ್ಟರು ತೀರಿಸಲಾಗದಿವಳ ಋಣವನು

ತಾಯಿರೂಪ ತಾಳಿ ಹರಿಯು
ತಾಯಯಾಗಿ ಸಲಹುವ
ತಾಯಿಯಂತೆ ನಮ್ಮ ಕಾಯ್ವ
ತಾಯಿದೇವಿಗೊಂದಿಪೆ

ಶ್ರೀ ಕೃಷ್ಣಾರ್ಪಣಮಸ್ತು
ರೂಪಶ್ರೀ ಶಶಿಕಾಂತ್

Comments